ನಾಜಿಸಮ್
From Wikipedia, the free encyclopedia
ನಾಜಿಸಮ್ (Nationalsozialismus , ನ್ಯಾಶನಲ್ ಸೋಶಿಯಲಿಸಮ್ ಅಥವಾ ರಾಷ್ಟ್ರೀಯ ಸಮಾಜವಾದ), ನಾಜೀ ಪಕ್ಷ ಮತ್ತು ನಾಜೀ ಜರ್ಮನಿಯ ಸಿದ್ಧಾಂತ ಮತ್ತು ಆಚರಣೆಯಾಗಿದೆ.[1][2][3][4][5][6][7][8] ಇದು ಫ್ಯಾಸಿಸಂನ ರಾಜಕೀಯವಾಗಿ ಸಮನ್ವಯಗೊಂಡ ವಿಧವಾಗಿದ್ದು ಎಡ ಮತ್ತು ಬಲ ಸಿದ್ಧಾಂತಗಳ ನೀತಿ, ತತ್ವಜ್ಞಾನ, ಮತ್ತು ತಂತ್ರಗಳನ್ನೊಳಗೊಂಡಿದೆ. ನಾಜಿಸಮ್ ರಾಜಕೀಯದ ತೀವ್ರ ಬಲಪಂಥೀಯ ರೀತಿಯಾಗಿದೆ.[9]
ಪ್ರಥಮ ವಿಶ್ವಯುದ್ಧದ ನಂತರದ ವೀಮರ್ ಜರ್ಮನಿಯ ನಾಜೀಗಳು ಬಲಪಂಥೀಯ ರಾಜಕೀಯ ಪಕ್ಷಗಳಲ್ಲೊಬ್ಬರಾಗಿದ್ದು ತಮ್ಮದು ರಾಷ್ಟ್ರೀಯ ಸಮಾಜವಾದದ ಸಿದ್ಧಾಂತವೆಂದು ಗುರುತಿಸಿಕೊಂಡಿದ್ದರು. 1920ರಲ್ಲಿ ನಾಜೀ ಪಕ್ಷವು ತಮ್ಮ 25-ಅಂಶಗಳ National Socialist Program ಅನ್ನು ಪ್ರಕಟಿಸಿದರು ಮತ್ತು ಇದರ ಪ್ರಮುಖ ತತ್ವಗಳು ಹೀಗಿದ್ದವು: ಸಂಸತ್-ವಿರೋಧ, ಪ್ಯಾನ್-ಜರ್ಮನಿಸಮ್, ಜನಾಂಗೀಯತೆ, ಸಾಮುದಾಯಿಕತೆ, ಸಾಮಾಜಿಕ ಡಾರ್ವಿನಿಸಮ್, ಸುಸಂತಾನಶಾಸ್ತ್ರ, ಯಹೂದ್ಯ-ವಿರೋಧ, ಕಮ್ಯುನಿಸಮ್-ವಿರೋಧ, ಸರ್ವಾಧಿಕಾರಿತ್ವ, ಮತ್ತು ಆರ್ಥಿಕ ಹಾಗೂ ರಾಜಕೀಯ ಉದಾರವಾದಕ್ಕೆ ವಿರೋಧ.[10][11][11][12][13] ಆದರೂ, 1930ರ ದಶಕದ ಹೊತ್ತಿಗೆ, ಇಷ್ಟೆಲ್ಲ ಬೌದ್ಧಿಕ ತಳಹದಿಗಳನ್ನು ಹೊಂದಿದ್ದರೂ ಕೂಡ ನಾಜಿಸಮ್ ಒಂದು ಪಕ್ಕಾ ಸಿದ್ಧಾಂತವಾಗಿರದೆ ಕಾಲ್ಪನಿಕವಾದ Großdeutschland (ಗ್ರೇಟರ್ ಜರ್ಮನಿ)ಯನ್ನು ಸಾಕಾರಗೊಳಿಸಲು ಅವಶ್ಯಕವಾದ ಯೋಜನೆಗಳು, ಪರಿಕಲ್ಪನೆಗಳು, ಮತ್ತು ತತ್ವಜ್ಞಾನಗಳನ್ನೊಳಗೊಂಡ ಸಂಯೋಜನೆ ಮಾತ್ರವಾಗಿದ್ದಿತು.
ಜರ್ಮನಿಯನ್ನು ವಿಶ್ವದಾದ್ಯಂತ ಹರಡಿದ ಮಹಾ ಆರ್ಥಿಕ ಬಿಕ್ಕಟ್ಟಿನಿಂದ ಉಂಟಾದ ಸಾಮಾಜಿಕ-ಆರ್ಥಿಕ ಅತಂತ್ರದಿಂದ ಪಾರುಮಾಡುವ ಸಲುವಾಗಿ ನಾಜಿಸಮ್ ಒಂದು ರಾಜಕೀಯ-ಆರ್ಥಿಕ “ಮೂರನೇ ಹಾದಿ”ಯನ್ನು ಪ್ರವರ್ತಿಸಿತು; ಇದು ಬಂಡವಾಳಶಾಹಿಯೂ ಅಥವಾ ಕಮ್ಯುನಿಸ್ಟ್ ಕೂಡಾ ಅಲ್ಲದ ನಿರ್ವಹಣಾ ಆರ್ಥಿಕ ವ್ಯವಸ್ಥೆಯಾಗಿದ್ದಿತು.[14][15] ನಾಜಿಸಮ್ನ ತೀವ್ರ ಬಲಪಂಥೀಯ ಒಲವು ಬಂಡವಾಳಶಾಹೀ-ವಿರೋಧಿಯಾದ ಬ್ಲ್ಯಾಕ್ ಫ್ರಂಟ್ ಮತ್ತು ಸ್ಟ್ರ್ಯಾಸರಿಸಮ್ಗಳ ನಿರ್ಮೂಲನದಿಂದ ಸುಸ್ಪಷ್ಟವಾಯಿತು, ಇವು ವರ್ಸೇಲ್ಸ್ ಒಪ್ಪಂದದ ನಂತರ ಜರ್ಮನಿಯ ಪರಿಸ್ಥಿತಿ ಮತ್ತು ಸೇನೆಯ ಸೋಲಿಗೆ ಕಾರಣವಾಯಿತೆನ್ನಲಾದ ಆಂತರಿಕ ಜೂಡಿಯೋ-ಬೊಲ್ಷೆವಿಸ್ಟ್ ಪಿತೂರಿಗಳ ವಿರುದ್ಧದ ರಾಷ್ಟ್ರೀಯತಾವಾದದ ಕಹಿಭಾವನೆಯಿಂದ ಪ್ರೇರಣೆಗೊಂಡ ಎಡಪಂಥೀಯ ನಾಜೀ ಉಪಪಂಗಡಗಳಾಗಿದ್ದವು. ಸೋಲಿನಿಂದ ಹೊರಬಂದ ವೀಮರ್ ಗಣತಂತ್ರದ ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ಮತ್ತು ಆರ್ಥಿಕ ಅಸ್ವಸ್ಥತೆಗಳು ನಾಜಿಸಮ್ನ ಸೈದ್ಧಾಂತಿಕ ಕ್ರೋಢೀಕರಣದಲ್ಲಿ ಪ್ರಮುಖ ಪಾತ್ರವನ್ನು ವಹಿಸಿದವು, ಮತ್ತು ಮುಂದಕ್ಕೆ ಡ್ಯೂಶಸ್ ರೀಚ್ ನ ವೀಮರ್ ಸಂವಿಧಾನಕ್ಕೆ ಚುನಾವಣಾ ಸವಾಲನ್ನೊಡ್ಡಿ ನಾಜೀಪಕ್ಷವು 1933ರಲ್ಲಿ ಕಾನೂನುಬದ್ಧವಾಗಿ ಜರ್ಮನ್ ಸರ್ಕಾರದ ಅಧಿಕಾರವನ್ನು ಪಡೆದುಕೊಳ್ಳಲು ಕಾರಣವಾದವು.
ಈಗಿನ ಜರ್ಮನಿಯಲ್ಲಿ (BundesRepublik Deutschland) ನಾಜಿಸಮ್ನ ಸಿದ್ಧಾಂತ, ಸಂಕೇತಶಾಸ್ತ್ರ, ಮತ್ತು ಸಾಹಿತ್ಯವನ್ನು ನಿಷೇಧಿಸಲಾಗಿದೆ; ಆದರೂ ಕೂಡ ನಿಯೋ ನಾಜಿಸಮ್ ಅಸ್ತಿತ್ವದಲ್ಲಿದೆ ಮತ್ತು ಪ್ರಪಂಚದಾದ್ಯಂತ ಅನುಯಾಯಿಗಳನ್ನು ಹೊಂದಿದೆ. ನಾಜಿಸಮ್ನ ಜನಾಂಗ-ಯುದ್ಧಗಳ ರಾಜಕೀಯದ ಪರಿಣಾಮವಾಗಿ - ವಿಶೇಷವಾಗಿ ಹಾಲೋಕಾಸ್ಟ್-ಮಾರಣಹೋಮದಿಂದಾಗಿ — ನಾಜೀ ಎಂಬ ಪದ ಮತ್ತು ಅದಕ್ಕೆ ಸಂಬಂಧಿಸಿದ ಎಲ್ಲಾ ಕಲ್ಪನೆಗಳು ಮತ್ತು ಸಂಕೇತಗಳು (ಉದಾ. ಸ್ವಸ್ತಿಕ, SS ರೂನ್ಗಳು, SS ಸಮವಸ್ತ್ರಗಳು) ಯುರೋಪ್ ಮತ್ತು ಉತ್ತರ ಅಮೆರಿಕಾಗಳ ಬಿಳಿಯ ಶ್ರೇಷ್ಟತೆಯನ್ನು ಪ್ರತಿಪಾದಿಸುವ ಜನಾಂಗೀಯತೆಯನ್ನು ಪ್ರತಿನಿಧಿಸುತ್ತವೆ.