ಆರೋರಾ
From Wikipedia, the free encyclopedia
ಆರೋರಾ ಧ್ರುವಪ್ರದೇಶಗಳಲ್ಲಿ ರಾತ್ರಿಯ ಹೊತ್ತು ಆಗಸದಲ್ಲಿ ಕಾಣಬರುವ ವರ್ಣರಂಜಿತ ಬೆಳಕಿನಾಟ. ಇದೊಂದು ನೈಸರ್ಗಿಕ ವಿದ್ಯಮಾನವಾಗಿದೆ. ಉತ್ತರಧ್ರುವ ಪ್ರದೇಶದಲ್ಲಿ ಕಾಣುವ ಇಂತಹ ಬಣ್ಣದ ಬೆಳಕಿನಾಟವನ್ನು ಆರೋರಾ ಬೋರಿಯಾಲಿಸ್ ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ಆರೋರಾ ಬೋರಿಯಾಲಿಸ್ ಹಸಿರು ಬಣ್ಣದ ಹೊಳಪಿನೊಂದಿಗೆ ಕೂಡಿರುತ್ತದೆ. ಕೆಲವೊಮ್ಮೆ ಕೆಂಪು ಬಣ್ಣವು ಸಹ ಇದರಲ್ಲಿರುವುದುಂಟು. ಮೊದಲನೋಟಕ್ಕೆ ಇದು ಬೇರಾವುದೋ ದಿಕ್ಕಿನಲ್ಲಿ ಜರಗುತ್ತಿರುವ ಸೂರ್ಯೋದಯದಂತೆ ಭಾಸವಾಗುವುದು. ಆರೋರಾ ಬೋರಿಯಾಲಿಸ್ ಅನ್ನು ನಾರ್ದರ್ನ್ ಲೈಟ್ಸ್ (ಬಡಗಣ ಬೆಳಕು) ಎಂದು ಸಹ ಕರೆಯಲಾಗುತ್ತದೆ. ಆರೋರಾ ಬೋರಿಯಾಲಿಸ್ ಸೆಪ್ಟೆಂಬರ್ ನಿಂದ ಅಕ್ಟೋಬರ್ ವರೆಗೆ ಮತ್ತು ಮಾರ್ಚ್ ನಿಂದ ಎಪ್ರಿಲ್ ವರೆಗೆ ಘಟಿಸುತ್ತದೆ. ದಕ್ಷಿಣಧ್ರುವ ಪ್ರದೇಶದಲ್ಲಿ ಸಂಭವಿಸುವ ಇದೇ ರೀತಿಯ ವಿದ್ಯಮಾನವು ಆರೋರಾ ಆಸ್ಟ್ರಾಲಿಸ್ ಎಂದು ಹೆಸರಾಗಿದೆ.