ಕಣ ವೇಗೋತ್ಕರ್ಷಕ
From Wikipedia, the free encyclopedia
ಕಣ ವೇಗೋತ್ಕರ್ಷಕ (Particle Accelarator) ಎಂದರೆ ವಸ್ತುವಿನ ಸಣ್ಣ ಕಣಗಳನ್ನು ಅತ್ಯಂತ ವೇಗವಾಗಿ ಚಲಿಸುವಂತೆ ಮಾಡುವ ಸಾಧನ. ಎಲೆಕ್ಟ್ರಾನ್, ಪ್ರೋಟಾನ್ ಅಥವಾ ಭಾರ ಅಯಾನುಗಳಂಥ ಆವಿಷ್ಟ (ಚಾರ್ಜ್ಡ್) ಕಣಗಳ ಉಚ್ಚಶಕ್ತಿ ಮತ್ತು ವೇಗದ ದೂಲಗಳನ್ನು (ಬೀಮ್ಸ್) ಉತ್ಪಾದಿಸುವ ಸಾಧನ (ಆ್ಯಕ್ಸೆಲೆರೇಟರ್).[1][2] ಪರ್ಯಾಯ ಪದ: ಕಣ(ಪಾರ್ಟಿಕಲ್) ವೇಗೋತ್ಕರ್ಷಕ. ಅಯಾನುಗಳು ಹಾಗೂ ಉಪ ಪರಮಾಣು ಕಣ (Sub atomic particle) ಅಂದರೆ ಪರಮಾಣುಗಳಿಗಿಂತಲೂ ಸಣ್ಣದಾದ ಕಣಗಳನ್ನು ಒಂದು ಸಪೂರವಾದ ಕೊಳವೆಯಲ್ಲಿ ಹಾದುಹೋಗುವ ವ್ಯವಸ್ಥೆ ಇದರಲ್ಲಿರುತ್ತದೆ. ಈ ಕೊಳವೆಯಲ್ಲಿ ಹಾದು ಹೋಗುವ ಕಣದ ವೇಗವನ್ನು ವೇಗೋತ್ಕರ್ಷಿಸುವ ವ್ಯವಸ್ಥೆ ಈ ಯಂತ್ರದಲ್ಲಿರುತ್ತದೆ.
ಭೌತವಿಜ್ಞಾನಿಗಳು ಉಪಯೋಗಿಸುತ್ತಿರುವ ಉಪಕರಣಗಳ ಪೈಕಿ ಇವು ಅತ್ಯಂತ ದೊಡ್ಡವು ಹಾಗೂ ದುಬಾರಿಯವು. ಎಲ್ಲ ವೇಗೋತ್ಕರ್ಷಕಗಳಲ್ಲಿ ಮೂರು ಪ್ರಧಾನ ಭಾಗಗಳಿವೆ: ಕಣಗಳ ಅಥವಾ ಅಯಾನುಗಳ ಆಕರ, ಕಣಗಳು ಮುಕ್ತವಾಗಿ ಚಲಿಸಬಲ್ಲ ನಿರ್ವಾತಗೊಳಿಸಿದ ಕೊಳವೆ ಮತ್ತು ಕಣಗಳ ವೇಗವರ್ಧಿಸಬಲ್ಲ ವ್ಯವಸ್ಥೆ.