ಜೀವ ಭೂ ರಾಸಾಯನಿಕ ಚಕ್ರಗಳು
From Wikipedia, the free encyclopedia
'ಜೀವಭೂರಾಸಾಯನಿಕ ಚಕ್ರವು' ಹೆಸರೇ ಹೇಳುವಂತೆ ಜೈವಿಕ, ರಾಸಯನಿಕ ಮತ್ತು ಭೌಮಿಕ ಘಟಕಗಳನ್ನೊಳಗೊಂಡಿದೆ. ಇಂಗಾಲ(ಕಾರ್ಬನ್), ಆಮ್ಲಜನಕ(ಆಕ್ಸಿಜನ್), ಸಾರಜನಕ(ನೈಟ್ರೋಜನ್), ನೀರು, ರಂಜಕ(ಫೊಸ್ಫೊರಸ್), ಗಂಧಕ(ಸಲ್ಫರ್) ಮುಂತಾದ ಪೋಷಕಾಂಶಗಳು ಜೈವಿಕ ಮತ್ತು ಭೌತಿಕ ಜಗತ್ತಿನ ನಡುವೆ ನಿರಂತರವಾಗಿ ವಿನಿಮಯಗೊಳ್ಳುತ್ತವೆ. ಪರಿಸರ ವ್ಯವಸ್ಥೆಯಲ್ಲಿ ಪೋಷಕಾಂಶಗಳ ಚಕ್ರೀಯ ಚಲನೆಯನ್ನು, ಜೀವಭೂರಾಸಾಯನಿಕ ಚಕ್ರ ಎನ್ನುವರು. ಯಾವುದೇ ಜೀವಭೂರಾಸಾಯನಿಕ ಚಕ್ರದಲ್ಲಿ ಎರಡು ಘಟಕ ಅಥವಾ ಆಕರಗಳು ಇರುತ್ತವೆ. ಅವು :
- (೧) ಸಂಗ್ರಹ ಆಕರ ಮತ್ತು
- (೨) ವಿನಿಮಯ ಆಕರ.
ಸಂಗ್ರಹ ಆಕರವು ವಾಯುಗೋಳ, ಜಲಗೋಳ ಮತ್ತು ಶಿಲಾಗೋಳಗಳನ್ನು ಒಳಗೊಂಡಿರುತ್ತದೆ. ಇದು ಅಜೈವಿಕ ಘಟಕಗಳಿಂದಾದದ್ದು. ಈ ಆಕರದಲ್ಲಿ ರಾಸಾಯನಿಕಗಳ ಚಲನೆಯು ನಿಧಾನಗತಿಯಲ್ಲಿರುತ್ತದೆ. ವಿನಿಮಯ ಆಕರವು ಜೀವಿಗೋಳದ ಜೈವಿಕ ಘಟಕಗಳನ್ನು ಒಳಗೊಂಡಿರುತ್ತದೆ. ಸೂಕ್ಷ್ಮ ಜೀವಿಗಳು, ಸಸ್ಯಗಳು ಮತ್ತು ಪ್ರಾಣಿಗಳು ಈ ಆಕರವನ್ನು ಪ್ರತಿನಿಧಿಸುತ್ತವೆ. ಈ ಆಕರದಲ್ಲಿ ವಸ್ತುಗಳ ಚಲನೆಯು ಶೀಘ್ರಗತಿಯಲ್ಲಿರುತ್ತದೆ. ಸಂಗ್ರಹ ಆಕರದಿಂದ ಪೋಷಕಾಂಶಗಳು ವಿನಿಮಯ ಆಕರಕ್ಕೆ ಚಲಿಸುವುದು ಅಥವಾ ಪ್ರವೇಶಿಸುವುದನ್ನು ಸ್ಥಿರೀಕರಣ ಎನ್ನುವರು. ಪೋಷಕಗಳು ವಿನಿಮಯ ಆಕರದಿಂದ ಸಂಗ್ರಹ ಆಕರಕ್ಕೆ ಹಿಂದಿರುಗುವುದನ್ನು ಮರುಚಕ್ರೀಕರಣ ಎನ್ನುವರು. ಅನಿಲದ ಚಕ್ರಗಳು ಮತ್ತು ಚರಟದ ಚಕ್ರಗಳು ಜೀವಭೂರಾಸಾಯನಿಕ ಚಕ್ರದ ಎರಡು ವಿಧಗಳು. ಅನಿಲದ ಚಕ್ರಗಳಲ್ಲಿ ವಾಯುಗೋಳ ಮತ್ತು ಜಲಗೋಳಗಳು ಸಂಗ್ರಹ ಆಕರಗಳು. ಇಂಗಾಲ ಚಕ್ರ, ಸಾರಜನಕ ಚಕ್ರ, ಆಮ್ಲಜನಕ ಚಕ್ರ ಇತ್ಯಾದಿಗಳು ಅನಿಲದ ಚಕ್ರಗಳಿಗೆ ಕೆಲವು ಉದಾಹರಣೆಗಳು. ಚರಟದ ಚಕ್ರಗಳಲ್ಲಿ ಸಾಮಾನ್ಯವಾಗಿ ಶಿಲಾಗೋಳವು ಸಂಗ್ರಹ ಆಕರವಾಗಿರುತ್ತದೆ. ರಂಜಕದ ಚಕ್ರ, ಗಂಧಕದ ಚಕ್ರ ಇತ್ಯಾದಿಗಳು ಚರಟದ ಚಕ್ರಗಳಿಗೆ ಕೆಲವು ಉದಾಹರಗಳು.