ಪ್ರೇಮ ಮಂದಿರ, ವೃಂದಾವನ
From Wikipedia, the free encyclopedia
ಪ್ರೇಮ ಮಂದಿರ (ಟೆಂಪಲ್ ಆಫ್ ಲವ್) ಭಾರತದ ಉತ್ತರ ಪ್ರದೇಶದ ಮಥುರಾ ಜಿಲ್ಲೆಯ ವೃಂದಾವನದಲ್ಲಿರುವ ಹಿಂದೂ ದೇವಾಲಯವಾಗಿದೆ . ಇದು ಮಥುರಾ ನಗರಕ್ಕೆ ಹತ್ತಿರವಾಗಿದೆ. ಈ ಮಂದಿರವು ಅಂತರಾಷ್ಟ್ರೀಯ ಲಾಭರಹಿತ, ಶೈಕ್ಷಣಿಕ, ಆಧ್ಯಾತ್ಮಿಕ, ಚಾರಿಟಬಲ್ ಟ್ರಸ್ಟ್ ಆದಂತಹ ಜಗದ್ಗುರು ಕೃಪಾಲು ಪರಿಷತ್ನಿಂದ ನಿರ್ವಹಿಸಲ್ಪಡುತ್ತದೆ. ಈ ಸಂಕೀರ್ಣವು ವೃಂದಾವನದ ಹೊರವಲಯದ ೫೫ ಎಕರೆ ಪ್ರದೇಶದಲ್ಲಿದೆ. ಈ ಮಂದಿರವು ರಾಧಾ ಕೃಷ್ಣ ಮತ್ತು ಸೀತಾ ರಾಮರಿಗೆ ಸಮರ್ಪಿಸಲಾಗಿದೆ. ಇಲ್ಲಿ ರಾಧಾ ಕೃಷ್ಣ ಮೊದಲ ಹಂತದಲ್ಲಿ ಮತ್ತು ಸೀತಾ ರಾಮ ಎರಡನೇ ಹಂತದಲ್ಲಿದ್ದಾರೆ. ಈ ದೇವಾಲಯವನ್ನು ಐದನೇ ಮೂಲ ಜಗದ್ಗುರು ಶ್ರೀ ಕೃಪಾಲು ಜಿ ಮಹಾರಾಜರು ಸ್ಥಾಪಿಸಿದರು. [1] ಶ್ರೀ ಕೃಷ್ಣ ಮತ್ತು ರಾಸಿಕ್ ಸಂತರ ವಿವಿಧ ಲೀಲೆಗಳನ್ನು ಮುಖ್ಯ ದೇವಾಲಯದ ಗೋಡೆಯ ಮೇಲೆ ಚಿತ್ರಿಸಲಾಗಿದೆ. [2]
ಪ್ರೇಮ ಮಂದಿರ | |
---|---|
ಭೂಗೋಳ | |
ದೇಶ | ಭಾರತ |
ರಾಜ್ಯ | ಉತ್ತರ ಪ್ರದೇಶ |
ಜಿಲ್ಲೆ | ಮಥುರಾ |
ಸ್ಥಳ | ವೃಂದಾವನ, ಮಥುರಾ ಜಿಲ್ಲೆ, ಉತ್ತರ ಪ್ರದೇಶ |
ಎತ್ತರ | 169.78 m (557 ft) |
ಇತಿಹಾಸ ಮತ್ತು ಆಡಳಿತ | |
ಸೃಷ್ಟಿಕರ್ತ | ಶ್ರೀ ಕೃಪಾಲು ಜಿ ಮಹಾರಾಜ |
ಅಧೀಕೃತ ಜಾಲತಾಣ | http://jkp.org.in |
ಈ ಮಂದಿರದ ನಿರ್ಮಾಣವು ಜನವರಿ ೨೦೦೧ ರಲ್ಲಿ ಪ್ರಾರಂಭವಾಯಿತು ಹಾಗೂ ಉದ್ಘಾಟನಾ ಸಮಾರಂಭವು ೧೫ ರಿಂದ ೧೭ ಫೆಬ್ರವರಿ ೨೦೧೨ ರವರೆಗೆ ನಡೆಯಿತು. ಫೆಬ್ರವರಿ ೧೭ ರಂದು ದೇವಾಲಯವನ್ನು ಸಾರ್ವಜನಿಕರಿಗೆ ತೆರೆಯಲಾಯಿತು. ಇದರ ವೆಚ್ಚ ೧೫೦ ಕೋಟಿ ರೂಪಾಯಿಗಳು ($೨೩ ಮಿಲಿಯನ್).[3][4] [5] ಶ್ರೀ ರಾಧಾ ಗೋವಿಂದ್ (ರಾಧಾ ಕೃಷ್ಣ) ಮತ್ತು ಶ್ರೀ ಸೀತಾ ರಾಮ್ ಈ ದೇಗುಲದ ಪ್ರಧಾನ ದೇವತೆಗಳಾಗಿದ್ದಾರೆ. ಈ ಮಂದಿರದ ಪಕ್ಕದಲ್ಲಿ ೭೩,೦೦೦ ಚದರ ಅಡಿ, ಪಿಲ್ಲರ್ಗಳಿಲ್ಲದ ಗುಮ್ಮಟದ ಆಕಾರದ ಸತ್ಸಂಗ ಸಭಾಂಗಣವನ್ನು ನಿರ್ಮಿಸಲಾಗುತ್ತಿದ್ದು, ಇದು ಏಕಕಾಲದಲ್ಲಿ ೨೫,೦೦೦ ಜನರಿಗೆ ಕೂಡಲು ಅವಕಾಶ ಕಲ್ಪಿಸುತ್ತದೆ.[6] ಉದ್ಯಾನವನಗಳು ಮತ್ತು ಕಾರಂಜಿಗಳಿಂದ ಆವೃತವಾಗಿರುವ ದೇವಾಲಯದ ಸಂಕೀರ್ಣವು ಶ್ರೀ ಕೃಷ್ಣನ ಜೀವನದ ನಾಲ್ಕು ಲೀಲೆಗಳ ಚಿತ್ರಣವನ್ನು ಹೊಂದಿದೆ. ಅವುಗಳು- ಜೂಲನ್ ಲೀಲಾ, ಗೋವರ್ಧನ ಲೀಲಾ, ರಾಸ್ ಲೀಲಾ ಮತ್ತು ಕಾಲಿಯಾ ನಾಗ್ ಲೀಲಾ.
ಇದು ೨೦೦೫ ರಲ್ಲಿ ತೆರೆಯಲಾದ ಭಕ್ತಿ ಮಂದಿರದ ಸಹೋದರಿ ದೇವಾಲಯವಾಗಿದೆ ಮತ್ತು ೨೦೧೯ರಲ್ಲಿ ಬರ್ಸಾನಾದಲ್ಲಿ ತೆರೆಯಲಾದ ಕೀರ್ತಿ ಮಂದಿರಕ್ಕೂ ಇದು ಮತ್ತೊಂದು ಸಹೋದರಿ ದೇವಾಲಯವಾಗಿದೆ.[7]