ಭಾರತದಲ್ಲಿ ಜವಳಿ ಉದ್ಯಮ
From Wikipedia, the free encyclopedia
ಸಾಂಪ್ರದಾಯಿಕವಾಗಿ ಭಾರತದಲ್ಲಿ ಜವಳಿ ಉದ್ಯಮವು ಕೃಷಿಯ ನಂತರ ನುರಿತ ಮತ್ತು ಕೌಶಲ್ಯರಹಿತ ಕಾರ್ಮಿಕರಿಗೆ ದೊಡ್ಡ ಉದ್ಯೋಗವನ್ನು ಸೃಷ್ಟಿಸಿದ ಏಕೈಕ ಉದ್ಯಮವಾಗಿದೆ. ಜವಳಿ ಉದ್ಯಮವು ಭಾರತದಲ್ಲಿ ಎರಡನೇ ಅತಿ ದೊಡ್ಡ ಉದ್ಯೋಗ ಸೃಷ್ಟಿಸುವ ಕ್ಷೇತ್ರವಾಗಿ ಮುಂದುವರಿದಿದೆ. ಇದು ದೇಶದಲ್ಲಿ ಸುಮಾರು ೩೫ ಮಿಲಿಯನ್ ಜನರಿಗೆ ನೇರ ಉದ್ಯೋಗವನ್ನು ನೀಡುತ್ತದೆ.[1] ಭಾರತವು ವಿಶ್ವದ ಎರಡನೇ ಅತಿ ದೊಡ್ಡ ಜವಳಿ ಮತ್ತು ಬಟ್ಟೆ ರಫ್ತುದಾರನಾಗಿದ್ದು, ೨೦೨೨ ರ ಆರ್ಥಿಕ ವರ್ಷದಲ್ಲಿ ರಫ್ತು ಯುಎಸ್(US) $ ೪೪.೪ ಬಿಲಿಯನ್ ಆಗಿತ್ತು.[2] ಜವಳಿ ಸಚಿವಾಲಯದ ಪ್ರಕಾರ ಏಪ್ರಿಲ್-ಜುಲೈ ೨೦೧೦ರ ಒಟ್ಟು ರಫ್ತಿನಲ್ಲಿ ಜವಳಿ ಪಾಲು ೧೧.೦೪% ಆಗಿತ್ತು ಹಾಗೂ ೨೦೦೯-೨೦೧೦ರ ಅವಧಿಯಲ್ಲಿ ಭಾರತೀಯ ಜವಳಿ ಉದ್ಯಮವು US$ ೫೫ ಶತಕೋಟಿಯಷ್ಟಿತ್ತು. ಅದರಲ್ಲಿ ೬೪% ದೇಶೀಯ ಬೇಡಿಕೆಗೆ ಸೇವೆ ಸಲ್ಲಿಸುತ್ತದೆ. [1] ೨೦೧೦ ರಲ್ಲಿ ಭಾರತದಲ್ಲಿ ೨,೫೦೦ ಜವಳಿ ನೇಯ್ಗೆ ಕಾರ್ಖಾನೆಗಳು ಮತ್ತು ೪,೧೩೫ ಜವಳಿ ಫಿನಿಶಿಂಗ್ ಕಾರ್ಖಾನೆಗಳು ಇದ್ದವು. [3] ಎ.ಟಿ. ಕೆರ್ನಿಯವರ '''ಚಿಲ್ಲರೆ ಉಡುಪು ಸೂಚ್ಯಂಕ'''ದ ಪ್ರಕಾರ, ೨೦೦೯ರಲ್ಲಿ ಭಾರತವು ಚಿಲ್ಲರೆ ಉಡುಪು ವ್ಯಾಪಾರಿಗಳಿಗೆ [4] ಅತ್ಯಂತ ಭರವಸೆಯ ಮಾರುಕಟ್ಟೆಯಾಗಿ ಸ್ಥಾನ ಪಡೆದಿದೆ.
ನಾರಿನ ಉತ್ಪಾದನೆಯಲ್ಲಿ ಭಾರತವು ಎರಡನೇ ಸ್ಥಾನದಲ್ಲಿದೆ ಹಾಗೂ ಇಡೀವಿಶ್ವದಲ್ಲಿ ಹತ್ತಿ ಮತ್ತು ಸೆಣಬಿನ ಅತಿದೊಡ್ಡ ಉತ್ಪಾದಕ ದೇಶವಾಗಿದೆ. [5] [6] ಭಾರತವು ವಿಶ್ವದ ಎರಡನೇ ಅತಿ ದೊಡ್ಡ ರೇಷ್ಮೆ ಉತ್ಪಾದಕ ರಾಷ್ಟ್ರವಾಗಿದೆ. [7] ಭಾರತದಲ್ಲಿ ಉತ್ಪತ್ತಿಯಾಗುವ ಇತರ ಫೈಬರ್ಗಳಲ್ಲಿ ಉಣ್ಣೆ ಮತ್ತು ಮಾನವ ನಿರ್ಮಿತ ಫೈಬರ್ಗಳು ಸೇರಿವೆ. ಜವಳಿ ವಲಯದಲ್ಲಿ ಸ್ವಯಂಚಾಲಿತ ಮಾರ್ಗದ ಮೂಲಕ ೧೦೦% ಎಫ್ಡಿಐ ಅನ್ನು ಅನುಮತಿಸಲಾಗಿದೆ . ರೈಟರ್, ಟ್ರುಟ್ಜ್ಸ್ಕ್ಲರ್, ಸೌರರ್, ಸೊಕ್ಟಾಸ್, ಜಾಂಬಿಯಾಟಿ, ಬಿಲ್ಸರ್, ಮೊಂಟಿ, ಸಿಎಮ್ಟಿ, ಇ-ಲ್ಯಾಂಡ್, ನಿಸ್ಶಿನ್ಬೋ, ಮಾರ್ಕ್ಸ್ & ಸ್ಪೆನ್ಸರ್, ಜರಾ, ಪ್ರಮೋಡ್, ಬೆನೆಟ್ಟನ್ ಮತ್ತು ಲೆವಿಸ್ ಇವು ಭಾರತದಲ್ಲಿ ಹೂಡಿಕೆ ಮಾಡಿದ ಅಥವಾ ಕೆಲಸ ಮಾಡುತ್ತಿರುವ ಕೆಲವು ವಿದೇಶಿ ಜವಳಿ ಕಂಪನಿಗಳಾಗಿವೆ.[8] ಜನವರಿ ಮತ್ತು ಜುಲೈ ೨೦೨೧ ರ ನಡುವೆ ಭಾರತವು ರೂ ೧.೭೭ ಲಕ್ಷ ಕೋಟಿ ಮೌಲ್ಯದ ಜವಳಿ ಉತ್ಪನ್ನಗಳನ್ನು ರಫ್ತು ಮಾಡಿದೆ ಹಾಗೂ ಇದು ಕಳೆದ ವರ್ಷದ ಇದೇ ಅವಧಿಗಿಂತ ೫೨.೬%ರಷ್ಟು ಹೆಚ್ಚಾಗಿದೆ.[9]