ಉಪ್ಪು (ಖಾದ್ಯ)
From Wikipedia, the free encyclopedia
ಉಪ್ಪು ಪ್ರಾಣಿಜೀವನಕ್ಕೆ ಅವಶ್ಯಕವಾದ ಒಂದು ಖನಿಜ. ಖಾದ್ಯ ಉಪ್ಪು ಮುಖ್ಯವಾಗಿ ಸೋಡಿಯಮ್ ಕ್ಲೋರೈಡ್ ಅನ್ನು ಒಳಗೊಂಡಿರುತ್ತದೆ. ೮೦೪º ಸೆಂ.ಗ್ರೇ. ಉಷ್ಣತೆಯಲ್ಲಿ ಕರಗುತ್ತದೆ. ದ್ರವಿತವಸ್ತು ೧೪೧೩º ಸೆಂ.ಗ್ರೇ. ಉಷ್ಣತೆಯಲ್ಲಿ ಕುದಿಯುತ್ತದೆ. ಮಾನವನು ಆಹಾರದಲ್ಲಿ ಬಳಸುವ ಉಪ್ಪು ಹಲವು ಬಗೆಯಲ್ಲಿ ತಯಾರಾಗುತ್ತವೆ. ಇವುಗಳಲ್ಲಿ ಶುದ್ಧೀಕರಣಗೊಳ್ಳದ ಸಮುದ್ರದ ಉಪ್ಪು (ಕಲ್ಲುಪ್ಪು), ಶುದ್ಧೀಕೃತ ಪುಡಿ ಉಪ್ಪು (ಟೇಬಲ್ ಸಾಲ್ಟ್)ಮತ್ತು ಅಯೊಡಿನ್ ಒಳಗೊಂಡಿರುವ ಉಪ್ಪು ಪ್ರಮುಖವಾದವು. ಉಪ್ಪು ಬಿಳಿ, ತೆಳು ಗುಲಾಬಿ ಅಥವಾ ತೆಳುಗಪ್ಪು ಬಣ್ಣದ ಹರಳು. ಉಪ್ಪನ್ನು ಸಾಮಾನ್ಯವಾಗಿ ಸಮುದ್ರದ ನೀರು ಅಥವಾ ಭೂಮಿಯಲ್ಲಿನ ಉಪ್ಪಿನ ಬಂಡೆಗಳಿಂದ (ಲವಣಶಿಲೆ) ಪಡೆಯಲಾಗುತ್ತದೆ. ಬಂಡೆಗಳಿಂದ ಪಡೆಯುವ ಉಪ್ಪು ತನ್ನಲ್ಲಿರುವ ಇತರ ಖನಿಜಗಳ ಕಾರಣದಿಂದಾಗಿ ಮಾಸಲು ಕಪ್ಪು ಬಣ್ಣ ಹೊಂದಿರಬಹುದು.
ಉಪ್ಪಿನ ಮೂಲ ಧಾತುಗಳಾದ ಸೋಡಿಯಮ್ ಮತ್ತು ಕ್ಲೋರಿನ್ಗಳೆರಡೂ ಮಾನವನೂ ಸೇರಿದಂತೆ ಎಲ್ಲ ಜೀವಿಗಳ ಉಳಿವಿಗೆ ಅವಶ್ಯವಾಗಿವೆ.[1] ಉಪ್ಪು ಶರೀರದ ಜಲಪ್ರಮಾಣವನ್ನು ನಿಯಂತ್ರಿಸುವಲ್ಲಿ ಸಹಕಾರಿಯಾಗಿದೆ. ಆದರೆ ಈ ಎರಡು ಧಾತುಗಳನ್ನು ಉಪ್ಪಿನ ರೂಪದಲ್ಲಿಯೇ ಸೇವಿಸಬೇಕಾದ ಪ್ರಮೇಯವೇನಿಲ್ಲ. ಇತರ ಆಹಾರ ಪದಾರ್ಥಗಳ ಮೂಲಕ ಸಹ ಇವೆರಡು ಧಾತುಗಳನ್ನು ಮಾನವನು ಪಡೆಯಬಹುದಾಗಿದೆ. ವಿಶ್ವದ ಕೆಲವೆಡೆ ಹಲವು ಮೂಲನಿವಾಸಿಗಳು ಉಪ್ಪನ್ನು ಬಲು ಕಡಿಮೆ ಪ್ರಮಾಣದಲ್ಲಿ ಬಳಸುವುದು ಕಂಡು ಬಂದಿದೆ.
ಉಪ್ಪು ಆಹಾರದ ಮೂಲ ರುಚಿಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿದೆ.[2] ಹಲವು ಬಾರಿ ಸಿದ್ಧ ಆಹಾರವನ್ನು ಕೆಡದಂತೆ ರಕ್ಷಿಸುವಲ್ಲಿ ಉಪ್ಪನ್ನು ಬಳಸಲಾಗುತ್ತದೆ. ಆದರೆ ಉಪ್ಪಿನ ಅತಿಯಾದ ಸೇವನೆ ಶರೀರಕ್ಕೆ ಹಾನಿಯುಂಟುಮಾಡಬಲ್ಲುದು. ಅತಿ ರಕ್ತದೊತ್ತಡದಂತಹ ಆರೋಗ್ಯದ ಸಮಸ್ಯೆಗಳನ್ನು ಉಪ್ಪು ಉಂಟುಮಾಡುತ್ತದೆ.
ಸಾಮಾನ್ಯವಾಗಿ ಸಮುದ್ರದ ನೀರು ಲವಣಯುಕ್ತವಾಗಿರುವ ಪ್ರಮುಖ ಕಾರಣ ಸೋಡಿಯಂ ಕ್ಲೋರೈಡ್ ಆಗಿದೆ. ಹಲವಾರು ಬಹುಕೋಶೀಯ ಜೀವಿಗಳಲ್ಲಿ ಇರುವ ಸಹಕೋಶೀಯ ದ್ರಾವಣವಾಗಿದೆ. ಇದನ್ನು ಸಾಮಾನ್ಯವಾಗಿ ಆಹಾರ ಸಾಮಗ್ರಿಗಳನ್ನು ಸುರಕ್ಷಿತವಾಗಿ ಸಂಗ್ರಹಿಸುವ ಕಾರ್ಯಕ್ಕಾಗಿ ಹಾಗೂ ಬೇಕರಿ ಉತ್ಪನ್ನಗಳ ತಯಾರಿಕೆಯಲ್ಲಿ ಬಳಸುತ್ತಾರೆ.[3] ಹಲವಾರು ಕೈಗಾರಿಕೆಗಳ ಪ್ರಕ್ರಿಯೆಗಳಲ್ಲಿ ಸೋಡಿಯಂ ಕ್ಲೋರೈಡ್ ನ್ನು ಅತ್ಯಂತ ವ್ಯಾಪಕವಾಗಿ ಬಳಸಲಾಗುತ್ತದೆ. ರಾಸಾಯನಿಕ ವಿಶ್ಲೇಷಣೆಗೆ ಪೂರಕವಾಗಿ ಸೋಡಿಯಂ ಕ್ಲೋರೈಡ್ನ್ನು ಬಳಸಲಾಗುತ್ತದೆ. ಹಿಮಚ್ಛಾದಿತ ಪ್ರದೇಶಗಳಲ್ಲಿ ರಸ್ತೆಯಲ್ಲಿ ಜಮೆಯಾಗಿರುವ ಮಂಜನ್ನು ಕರಗಿಸಲು ಉಪ್ಪನ್ನು ಪ್ರಮುಖವಾಗಿ ಬಳಸುತ್ತಾರೆ.[4]