ಗ್ರಾಮಗಳು
ಕಡಿಮೆ ಜನವಸತಿ ಇರುವ ಭೂಪ್ರದೇಶ / From Wikipedia, the free encyclopedia
ಗ್ರಾಮ - ಹಳ್ಳಿ, ಪಳ್ಳಿ, ಊರು, ಗುಡಾ, ಗಾಂವ್, ಕಸಬಾ, ಖೇಡಾ ಎಂದು ಭಾರತದ ಬೇರೆ ಬೇರೆ ಕಡೆಗಳಲ್ಲಿ ಪರಿಚಿತವಾಗಿರುವ ಸಮುದಾಯ. ಭರತ ಇವನ್ನು ಬ್ರಾಹ್ಮಣಾದಿ ವರ್ಣಗಳಿಂದ ಕುಡಿದ, ಪ್ರಾಕಾರ ಕಂದಕಗಳಿಲ್ಲದ, ಬಹುಜನವಸತಿಗಳೆಂದು ಹೇಳಿದ್ದಾನೆ. ಇವನ್ನು ಸಾಮಾನ್ಯವಾಗಿ ಶಾಶ್ವತವಾದ, ಗಾತ್ರದಲ್ಲಿ ಚಿಕ್ಕದಾದ, ಮುಖ್ಯವಾಗಿ ಭೂವ್ಯವಸಾಯವುಳ್ಳ, ಹತ್ತಿರ ಹತ್ತಿರ ವಾಸಿಸುವ ಕೆಲವು ಕುಟುಂಬಗಳಿರುವ, ಪ್ರಾಥಮಿಕ ಸಂಬಂಧಗಳು ಪ್ರಧಾನವಾಗಿರುವ ನೆಲೆಗಳೆಂದು ಕರೆಯಬಹುದು. ಈ ಭೌತಿಕ ಹಾಗೂ ಸಾಮಾಜಿಕ ಆಧಾರಗಳ ಮೇಲಿಂದ ಗ್ರಾಮಗಳನ್ನು ಅಲೆಮಾರಿಗಳ ತಂಡಗಳಿಂದ, ಚದರಿದ ಕೊಪ್ಪಲು ಅಥವಾ ಪಾಳೆಯಗಳಿಂದ, ಉಪನಗರ ಹಾಗೂ ಮಹಾನಗರಗಳಿಂದ ವಿಂಗಡಿಸುವುದು ಸಾಧ್ಯ.