ಜಲಪಾತ
From Wikipedia, the free encyclopedia
ಜಲಪಾತ- ನದೀಪಾತ್ರ ಬಲು ಕಡಿದೂ ಆಳವೂ ಆಗಿರುವೆಡೆಯಲ್ಲಿ ಹರಿಯುತ್ತಿರುವ ನೀರು ಎತ್ತರದಿಂದ ದುಮುಕುವ ಒಂದು ಭೌಗೋಳಿಕ ಲಕ್ಷಣ (ವಾಟರ್ ಫಾಲ್). ಸಾಮಾನ್ಯವಾಗಿ ಬೆಟ್ಟಪ್ರದೇಶಗಳಲ್ಲಿ ಏರು ತಗ್ಗುಗಳಲ್ಲಿ ಹರಿಯುವ ನದಿಗಳು [1] ಸೃಷ್ಟಿಸುತ್ತವೆ.ಜಲಪಾತಗಳು ಸಾಮಾನ್ಯವಾಗಿ ನದಿಯ ಮೇಲಿನ ಪಥವುಗಳಿಂದ ರಚನೆಯಾಗುತ್ತವೆ.ನೀರಿನ ರಭಸ, ಹಾಲ್ನೊರೆಯಂತಹ ಬಣ್ಣ, ಗಂಭೀರವಾದ ಸದ್ದು, ಹತ್ತಿರದ ಸ್ಥಳಗಳಲ್ಲಿ ತಂಪಾದ ನೀರಿನ ಚಿಕ್ಕ ಚಿಕ್ಕ ಹನಿಗಳ ಸಿಂಚನ, ಇವೆಲ್ಲವೂ ಜನರನ್ನು ಆಕರ್ಷಿಸುತ್ತವೆ.
ಬರೆಯ ಅಂಚು ಬಲು ಕಡಿದಾಗಿದ್ದರೆ ಅಲ್ಲಿ ನೀರು ಅತಿ ರಭಸದಿಂದ ನೆಗೆಯುವಾಗ, ನೆಲಸಂಪರ್ಕವೇ ಇಲ್ಲದೆ, ಹಲವಾರು ಅಡಿಗಳ ಆಳದಲ್ಲಿನ ತಳಕ್ಕೆ ಕೆಡೆಯಬಹುದು. ಬರೆ ಅಷ್ಟೊಂದು ಕಡಿದಾಗಿರದಿದ್ದರೆ ನೀರು ಅದರ ಮೈಯನ್ನು ತೊಳೆದುಕೊಂಡೇ ವೇಗದಿಂದ ಕೆಳಕ್ಕೆ ಬೀಳುತ್ತದೆ.
ಒಂದು ನದಿಯ ಉಗಮದಿಂದ ಅದು ಕೊನೆಯಾಗುವ ಮುಖದ ವರೆಗಿನ ಅದರ ಪ್ರವಾಹ ಮಾರ್ಗವನ್ನು ಮೇಲ್ಕಣಿವೆ (ಪರ್ವತಭಾಗ), ನಡುಕಣಿವೆ (ಮಧ್ಯಭಾಗ) ಮತ್ತು ಕೆಳಭಾಗ (ಬಯಲು ಭಾಗ) ಎಂಬುದಾಗಿ ವಿಭಾಗಿಸಬಹುದು. ಈ ಮೂರು ವಿಭಾಗಗಳಲ್ಲೂ ನದಿಯ ಚಲನಾತ್ಮಕ ಕ್ರಿಯೆಗಳಾದ ಕೊರೆಯುವಿಕೆ, ಸ್ಥಾನಾಂತರೀಕರಣ ಸಂಚಯನಗಳು ಆಯಾ ಭಾಗದ ಇಳಿಜಾರು ಮತ್ತು ಶಿಲಾಪ್ರಸ್ತರಗಳ ಲಕ್ಷಣ ಹವೆ ಮತ್ತು ಇತರ ವೈಶಿಷ್ಟ್ಯಗಳಿಗೆ ಅನುಸಾರವಾಗಿ ಸಾಗುತ್ತವೆ. ನದಿಯ ಮೇಲ್ಕಣಿವೆ ಎತ್ತರವಾದ ಪರ್ವತದಲ್ಲಿರುತ್ತದೆ. ಈ ಭಾಗದಲ್ಲಿ ಕಡಿದಾದ ಇಳಿಜಾರುಗಳು ಸ್ವಾಭಾವಿಕ. ಅಲ್ಲಿ ನದಿ ಅತಿ ವೇಗದಿಂದ ಪ್ರವಹಿಸುವುದರಿಂದ ಅದರ ಪಾತ್ರದ ಕೊರೆತ ಅತ್ಯಧಿಕವಾಗಿಯೂ ತೀವ್ರವಾಗಿಯೂ ನಡೆಯುತ್ತದೆ. ಪ್ರವಾಹದ ಕೊರೆವ ಸಾಮರ್ಥ್ಯ ನೀರಿನ ಮತ್ತು ಅದರಲ್ಲಿರುವ ಇತರ ವಸ್ತುಗಳ ಪರಿಮಾಣ, ಶಿಲಾಪ್ರಸ್ತರಗಳ ಲಕ್ಷಣ ಮತ್ತು ಎತ್ತರಗಳನ್ನು ಅವಲಂಬಿಸಿದೆ. ನದಿಯ ಪ್ರವಾಹಮಾರ್ಗದಲ್ಲಿ ಕಠಿಣ ಮತ್ತು ಮೃದು ಶಿಲಾ ಪ್ರಸ್ತರಗಳು ಪರ್ಯಾಯ ಕ್ರಮದಲ್ಲಿ ಬೆರೆತಿರುವುದುಂಟು. ಕಠಿಣ ಶಿಲೆಗಳ ಕೊರೆತ ಬಲು ನಿಧಾನ; ಮೃದು ಶಿಲೆಗಳಾದರೋ ಬಲು ಬೇಗನೆ ಶಿಥಿಲಗೊಳ್ಳುತ್ತವೆ. ಆಗ ಕಡಿದಾದ ಇಳಿತವುಂಟಾಗಿ ಮೇಲಿನ ಕಠಿಣಶಿಲೆಯ ಅಡಿಯಲ್ಲಿ ಹಳ್ಳವೊಂದು ನಿರ್ಮಾಣವಾಗುತ್ತದೆ. ಕೊರೆತ ಇನ್ನಷ್ಟು ಮುಂದೊತ್ತಿದಂತೆ ಕಠಿಣ ಶಿಲಾಮುಖ ಲಂಬವಾಗಿ ನಿಂತಮತೆ ಕಾಣುವುದು. ಆಗ ನದಿಯ ನೀರು ಅದರ ಮೇಲಿಂದ ಹರಿಯುತ್ತ ಒಮ್ಮೆಲೆ ಕೆಳಕ್ಕೆ ಹಾರಿಬೀಳುವುದು. ಇದೇ ಜಲಪಾತ. ಮೇಲಿನ ಕಠಿಣ ಶಿಲೆಗೆ ಜಲಪಾತಕಾರಿ ಎಂದು ಹೆಸರು. ಕಾಲಕ್ರಮದಲ್ಲಿ ಅದು ಶಿಥಿಲವಾಗುತ್ತ ಹೋದಂತೆ ಜಲಪಾತ ಹಿಮ್ಮೆಟ್ಟುವುದು. ಜಲಪಾತಗಳು ಹಲವು ಅಡಿಗಳಿಂದ ನೂರಾರು ಅಡಿಗಳಷ್ಟು ಆಳದ ವರೆಗೆ ಧುಮುಕುವವು. ಅವುಗಳ ಠೀವಿ ಸಿಡಿಯುವ ತುಷಾರಗಳ ಚೆಲುವು ಬಿಸಿಲಿನಲ್ಲಿ ಚೆಲ್ಲಾಡುವ ಬಣ್ಣಗಳ ಬೆಡಗು, ಭೋರ್ಗರೆಯುವ ಶಬ್ದಗಾಂಭೀರ್ಯ ಮತ್ತು ಪರಿಸರದ ಸೃಷ್ಟಿಸೌಂದರ್ಯ ವೀಕ್ಷಕರ ಕೆವಿ ಕಣ್ಮನಗಳನ್ನು ಸೂರೆಗೊಳ್ಳುತ್ತವೆ. ಜಲಪಾತಗಳ ಚಲನಶಕ್ತಿಯನ್ನು ಉಪಯುಕ್ತವಾಗಿ ಪರಿವರ್ತಿಸಿಕೊಳ್ಳುವುದು ಕೂಡ ಸಾಧ್ಯ.